Advertisements

ಯಾವ ದೇವರಿಗೆ ಯಾವ ಹೂ ಇಷ್ಟ..ಯಾವ ಹೂಗಳಿಂದ ಪೂಜೆ ಮಾಡಿದ್ರೆ ಹೆಚ್ಚು ಫಲಗಳು ಸಿಗುತ್ತೆ ಗೊತ್ತಾ ?

Adyathma

ನಮಸ್ತೇ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ವಿಗ್ರಹ ಆರಾಧನೆಗೆ ಹೆಚ್ಚು ಮಹತ್ವವಿದೆ. ಇನ್ನು ದೇವರನ್ನ ಪೂಜಿಸುವಾಗ ಹಲವು ರೀತಿಯ ಪೂಜಾ ಸಾಮಗ್ರಿಗಳನ್ನ ಉಪಯೋಗಿಸಲಾಗುತ್ತದೆ. ಅದರಲ್ಲಿ ದೇವರ ಪೂಜೆಗೆ ಬಳಸುವ ಹೂಗಳು ಹೆಚ್ಚು ಮಹತ್ವ ಪಡೆದಿವೆ. ದೇವಾಲಯಗಳಲ್ಲಿ ದೇವರ ಮಂಗಳಾರತಿಯ ಬಳಿಕ ಕೂಡ ಪ್ರಸಾದದ ರೂಪದಲ್ಲಿ ಹೂಗಳನ್ನ ಕೊಡಲಾಗುತ್ತದೆ. ಹೂಗಳಲ್ಲಿರುವ ಸುವಾಸನೆ ಭಕ್ತರ ಭಕ್ತಿಯನ್ನ ಹೆಚ್ಚಿಸುವುದರ ಜೊತೆಗೆ ಪ್ರಸಾದ ರೂಪದಲ್ಲಿ ಸಿಕ್ಕ ಹೂವು ಧನಾತ್ಮಕ ಶಕ್ತಿಯನ್ನ ವೃದ್ಧಿ ಮಾಡುತ್ತವೆ. ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತೆ ಬೇರೆ ಬೇರೆ ದೇವರುಗಳಿಗೆ ಬೇರೆ ಬೇರೆ ರೀತಿಯ ಹೂಗಳನ್ನ ಅರ್ಪಿಸಿ ಪೂಜೆ ನೆರವೇರಿಸಲಾಗುತ್ತದೆ. ಯಾವುದೇ ದೇವರಿಗೆ ಇಷ್ಟವಾದ ಹೂ ಇಟ್ಟು ಪೂಜೆ ಮಾಡುವುದರಿಂದ ನಮ್ಮ ಇಷ್ಟಕಾಮನೆಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಹಾಗಾದ್ರೆ ಯಾವ ದೇವರಿಗೆ ಯಾವ ಹೂವನ್ನ ಅರ್ಪಿಸಿ ಪೂಜೆ ಮಾಡಿದ್ರೆ ಹೆಚ್ಚು ಫಲ ದೊರೆಯುತ್ತೆ ನೋಡೋಣ ಬನ್ನಿ..

Advertisements

ನಾವು ಲಿಂಗರೂಪಿಯಾಗಿ ಪೂಜಿಸುವ ಭಗವಂತ ಶಿವನಿಗೆ ಬಿಲ್ವಪತ್ರೆ ತುಂಬಾ ಇಷ್ಟ. ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡುವುದು ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇನ್ನು ಪುರಾಣಗಳಲ್ಲಿ ಹೇಳಿರುವಂತೆ ಶಿವರಾತ್ರಿಯೆಂದು ಶಿವಲಿಂಗಕ್ಕೆ ಬಿಲ್ವಪತ್ರೆ ಸಮರ್ಪಿಸಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಫಲ ಪ್ರಾಪ್ತಿಯಾಗುತ್ತದೆ ನಂಬಿಕೆ ಇದೆ. ಇದರ ಜೊತೆಗೆ ನೇರಳೆ ಹೂ, ತುಂಬೆ ಹೂ, ಸಂಪಿಗೆ ಹೂಗಳನ್ನ ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ.

ಆದಿಶಕ್ತಿ ಪಾರ್ವತೀ ದೇವಿಗೆ ಸಂಪಿಗೆ ಹೂ, ಕದಂಬ ಹೂ, ಮಲ್ಲಿಗೆ, ದಾಸವಾಳ, ಕೆಂಡಸಂಪಿಗೆ ಹೂಗಳನ್ನ ದೇವಿಯ ಪೂಜೆಯಲ್ಲಿ ಬಳಸುವುದು ಫಲಪ್ರದಾಯಕವಾಗಿದೆ. ಹೂಗಳ ಕಾರಣದಿಂದಲೇ ಜಗನ್ಮಾತೆ ಪಾರ್ವತೀ ದೇವಿಗೆ ಕದಂಬವನ ವಾಸಿನಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇನ್ನು ಪಾರ್ವತೀ ದೇವಿಯ ಮತ್ತೊಂದು ಅವತಾರವಾದ ಕಾಳಿಮಾತೆಗೆ ಕೆಂಪು ಬಣ್ಣದ ಹೂಗಳು ತುಂಬಾ ಇಷ್ಟ ಅನ್ನುವ ನಂಬಿಕೆ ಇದೆ. ಹಾಗಾಗಿ ಕೆಂಪು ಬಣ್ಣದ ಹೂಗಳಾದ ಕಣಗಿಲೆ ಹೂ, ದಾಸವಾಳ ಸೇರಿದಂತೆ ಹಲವು ರೀತಿಯ ಕೆಂಪು ಹೂಗಳನ್ನ ಕಾಳಿ ಮಾತೆಯ ಪೂಜೆಯಲ್ಲಿ ಬಳಸಲಾಗುತ್ತದೆ.

ಕಮಲದ ಹೂವಿನ ಮೇಲೆ ವಿರಾಜಮಾನವಾಗಿರುವ ಐಶ್ವರ್ಯ ದೇವತೆ ಮಾತೆ ಲಕ್ಷ್ಮಿ ದೇವಿಗೆ ಕಮಲದ ಹೂ ಎಂದರೆ ತುಂಬಾ ಇಷ್ಟ. ಹಾಗಾಗಿ ಲಕ್ಷ್ಮಿ ಪೂಜೆಯ ವೇಳೆ ಹೆಚ್ಚಾಗಿ ಕಮಲದ ಹೂಗಳನ್ನ ಬಳಸಲಾಗುತ್ತದೆ. ಇದರ ಜೊತೆಗೆ ಸಂಪಿಗೆ, ಸೇವಂತಿ, ಕೇದಿಗೆ ಹೂಗಳನ್ನ ಲಕ್ಷ್ಮಿ ಪೂಜೆಯಲ್ಲಿ ಬಳಸುವುದು ಫಲಪ್ರದಾಯಕವಾಗಿದೆ. ವಿದ್ಯಾದೇವತೆ ಎನಿಸಿಕೊಂಡಿರುವ ಮಾತೆ ಶಾರದೆ ದೇವಿಯ ಪೂಜೆಯಲ್ಲಿ ಬಿಳಿಕಮಲ ಹಾಗೂ ಪಾರಿಜಾತ ಹೂಗಳನ್ನ ಬಳಸುವುದು ಶ್ರೇಷ್ಠ ಎಂದು ಶಾಸ್ತ್ರಗಳು ಹೇಳುತ್ತವೆ.

ಶಿವಪುತ್ರ ವಿನಾಯಕನ ಅಗ್ರಜನಾಗಿರುವ ಕುಮಾರ ಕಾರ್ತಿಕೇಯನ ಪೂಜೆಯಲ್ಲಿ ಕಮಲ ಹಾಗೂ ಕಣಗಿಲೆ ಹೂಗಳು ಶ್ರೇಷ್ಠವಾಗಿವೆ. ಶಿವಾಂಶ, ರಾಮಭಕ್ತ ಹನುಮಂತ ದೇವರಿಗೆ ತುಳಸಿಯ ಎಲೆಯ ಹೂವಿನ ಹಾರ ಅರ್ಪಿಸುವುದು ತುಂಬಾ ಶ್ರೇಷ್ಠ. ಇದರ ಜೊತೆಗೆ ಭಜರಂಗಿಯ ಪೂಜೆಯಲ್ಲಿ ಅಡಿಕೆಯ ಹಿಂಗಾರದ ಹೂವಿನ ಹಾರ ಕೂಡ ಅರ್ಪಿಸಲಾಗುತ್ತದೆ. ಇನ್ನು ಭಗವಂತ ನಾರಾಯಣನಿಗೆ ತುಳಸಿಯನ್ನ ಅರ್ಪಿಸಿ ಪೂಜೆ ಮಾಡುವುದರಿಂದ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.