ಸಬ್ಸಿಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಸಬ್ಸಿಗೆ ಸೊಪ್ಪಿನಿಂದ ಮಾಡಿದ ಅಡುಗೆಗಳನ್ನು ಬಾಣಂತಿಯರಿಗೆ ಬಡಿಸಿದರೆ ಅವರ ಅರೋಗ್ಯ ಉತ್ತಮವಾಗಿರುತ್ತದೆ. ಸಬ್ಸಿಗೆ ಸೊಪ್ಪು ಸಾಂಬಾರು ಮಾಡಿ ಅನ್ನದೊಂದಿಗೆ ಬಾಣಂತಿಯರು ಊಟ ಮಾಡಬಹುದು.
ಸಬ್ಸಿಗೆ ಸೊಪ್ಪು ಸಾರು ಮಾಡಲು ಬೇಕಾಗಿರುವ ಸಾಮಗ್ರಿಗಳು : ಸಬ್ಸಿಗೆ ಸೊಪ್ಪು ಒಂದು ಹಿಡಿ, ಎಣ್ಣೆ 2ಟೀ ಚಮಚ, ಧನಿಯಾ 1ಟೀ ಚಮಚ, ಹಸಿಮೆಣಸು 2-3, ಕಾಳುಮೆಣಸು 1ಟೀ ಚಮಚ, ತೆಂಗಿನ ತುರಿ 1/2ಕಪ್, ಜೀರಿಗೆ 1/2ಟೀ ಚಮಚ, ನೀರು 1ಲೀಟರ್.
ಒಗ್ಗರಣೆಗೆ ಬಳಸಬೇಕಾದ ಸಾಮಗ್ರಿಗಳು : ಸಾಸಿವೆ 1ಟೀಚಮಚ, ತುಪ್ಪ ಅಥಾವ ಎಣ್ಣೆ 1ಟೀ ಚಮಚ, ಇಂಗು 1/ಟೀ ಚಮಚ, ಹುಣಸೆ ರಸ ಸ್ವಲ್ಪ, ಬೆಲ್ಲ ಚಿಕ್ಕ ತುಂಡು, ಜೀರಿಗೆ 1ಟೀ ಚಮಚ.
ಸಬ್ಸಿಗೆ ಸೊಪ್ಪಿನ ಸಾರು ಮಾಡುವ ವಿಧಾನ: ಸಬ್ಸಿಗೆ ಸೊಪ್ಪನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಜೀರಿಗೆ, ಧನಿಯಾ, ಕಾಳುಮೆಣಸು, ಹಸಿಮೆಣಸು, ಇಷ್ಟನ್ನು ಹಾಕಿ ಹುರಿಯಿರಿ. ನಂತರ ಕತ್ತರಿಸಿದ ಸಬ್ಸಿಗೆ ಸೊಪ್ಪನ್ನು ಹಾಕಿ ಬಾಡಿಸಿ. ಈಗ ಇವುಗಳ ಜೊತೆಗೆ ತೆಂಗಿನ ತುರಿಯನ್ನು ಮಿಕ್ಸ್ ಮಾಡಿ ಒಂದು ನಿಮಿಷಗಳ ಕಾಲ ಹುರಿಯಿರಿ. ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಬಿಸಿಯಾದ ಎಣ್ಣೆಗೆ ಇಂಗು, ಸಾಸಿವೆ, ಮತ್ತು ಜೀರಿಗೆಯನ್ನು ಹಾಕಿ.
ಸಾಸಿವೆ ಸಿಡಿಯಲು ಪ್ರಾರಂಭವಾದಾಗ ರುಬ್ಬಿದ ಮಸಾಲೆಯ ಪದಾರ್ಥಗಳನ್ನು ಒಗ್ಗರಣೆಗೆ ಸೇರಿಸಿಕೊಳ್ಳಿ. ಆ ಮಿಶ್ರಣಕ್ಕೆ ಬೆಲ್ಲಮತ್ತು ಹುಣಸೆ ರಸ ವನ್ನುಸೇರಿಸಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಇಳಿಸಿಬಿಡಿ. ಈಗ ರುಚಿಯಾದ ಸಾರು ತಯಾರಿ ಮಾಡಿಕೊಂಡು ಸವಿಯಿರಿ. ಸಾರನ್ನು ಗಟ್ಟಿಯಾಗಿ ಮಾಡಿಕೊಂಡರೆ ಮುದ್ದೆಯೊಂದಿಗೆ ಸವಿಯಲು ಮಜವಾಗಿರುತ್ತದೆ. ನಿಮಗೆ ಬೇಕಿದ್ದರೆ ಬೆಳ್ಳುಳ್ಳಿಯನ್ನು ಸಹ ಹುರಿದು ಹಾಕಬಹುದು.