ನಾನು ನನ್ನ ಹೊಲಕ್ಕೆ ಹೋಗಲು ಹೆಲಿಕಾಪ್ಟರ್ ಬೇಕಾಗಿದ್ದು ಅದನ್ನ ಖರೀದಿಸಲು ಸಾಲ ಕೊಡಿಸಿ ಹಾಗೂ ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಮತಿ ನೀಡಿ ಪರವಾನಗಿ (ಲೈಸೆನ್ಸ್) ಕೊಡಿಸಿ ಎಂದು ಮಹಿಳೆಯೊಬ್ಬರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ಹೀಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಪತ್ರ ಬರೆದಿರುವ ಮಹಿಳೆಯ ಹೆಸರು ಬಸಂತಿ ಬಾಯ್ ಲೊಹರ್ ಎಂದು. ಮಧ್ಯ ಪ್ರದೇಶದ ಮಂಡ್ ಸೌರ್ ಜಿಲ್ಲೆಯ ಅಗರ್ ಎಂಬ ಗ್ರಾಮದವರು.

ನನ್ನ ಜಮೀನಿಗೆ ಹೋಗಲು ಅಕ್ಕ ಪಕ್ಕದಲ್ಲಿರುವ ಜಮೀನಿನವರು ದಾರಿ ಬಿಡುತ್ತಿಲ್ಲ. ಎತ್ತುಗಳನ್ನಾಗಲಿ ಕೃಷಿ ಉಪಕರಣಗಳನ್ನಾಗಲೀ ನನ್ನ ಹೊಲಕ್ಕೆ ಕೊಂಡಯ್ಯಲು ಆಗುತ್ತಿಲ್ಲ. ಅದಕ್ಕಾಗಿಯೇ ನನ್ನ ಜಮೀನಿಗೆ ಹೋಗುವ ಸಲುವಾಗಿ ನಾನು ಹೆಲಿಕಾಪ್ಟರ್ ಖರೀದಿ ಮಾಡಬೇಕು. ಅದಕ್ಕಾಗಿ ಸಾಲ ಕೊಡಿಸಿ ಜೊತೆಗೆ ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಮತಿ ಕೊಡಿಸಿ ಎಂದು ಹಿಂದಿಯಲ್ಲಿ ಪತ್ರ ಬರೆದಿದ್ದು ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ. ನನ್ನ ಹೊಲಕ್ಕೆ ಹೋಗುವ ಮಾರ್ಗದಲ್ಲಿ ಪರಮಾನಂದ್ ಎಂಬ ರೈತನೊಬ್ಬನ ಜಮೀನಿದ್ದು ಆತ ಮತ್ತು ಆತನ ಇಬ್ಬರು ಮಕ್ಕಳು ನನ್ನ ಹೊಲಕ್ಕೆ ಹೋಗದಂತೆ ಬಂದ್ ಮಾಡಿದ್ದಾರೆ.

ಹೀಗಾಗಿ ನಾನು ಹೊಲಕ್ಕೆ ಹೋಗಲು ಆಗದೆ ಕೃಷಿ ಕೆಲಸಗಳನ್ನ ಮಾಡಲಾಗುತ್ತಿಲ್ಲ. ಹೀಗಾದ್ರೆ ನಾವು ಜೀವನ ಮಾಡುವುದಾದ್ರು ಹೇಗೆ ಎಂದು ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ ಈ ರೈತ ಮಹಿಳೆ. ಗ್ರಾಮ ಪಂಚಾಯಿತಿ ಸೇರಿದಂತೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಮಂತ್ರಿ ಮೋದಿಯವರಿಗೂ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗಿಲ್ಲ. ಹಾಗಾಗಿ ನಾನು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೈತ ಮಹಿಳೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಇನ್ನು ಇದಕ್ಕೆ ರಾಷ್ಟ್ರಪತಿ ಭವನದಿಂದ ಏನುತ್ತರ ಬರಲಿದೆಯೋ ಕಾದು ನೋಡಬೇಕಾಗಿದೆ.